ಬ್ರಾಹೀ, ಟೈಕೊ 
	1546-1601. ಡೆನ್ಮಾರ್ಕಿನ ಖಗೋಳವಿಜ್ಞಾನಿ. ಸ್ವೀಡನ್ನಿನ ಸ್ಕೋನ ಎಂಬಲ್ಲಿ ಜನನ (14 ಡಿಸೆಂಬರ್ 1546). ಬ್ರಾಹೀ ತಂದೆ; ಬೀಯಟ್ ಬೀಲೆ ತಾಯಿ. ಇವನಿಗೆ ಐದು ಮಂದಿ ಸಹೋದರಿಯರೂ ಐದು ಮಂದಿ ಸಹೋದರರೂ ಇದ್ದರು. ಗ್ರೀಕಿನ ಖಗೋಳವಿಜ್ಞಾನಿ ಹಿಪ್ಪಾರ್ಕಸನನ್ನು ಬಿಟ್ಟರೆ ಬರಿಗಣ್ಣಿನ ಖಗೋಳವಿಜ್ಞಾನಿಗಳ ಪೈಕಿ ಶ್ರೇಷ್ಠಮಟ್ಟದವ ಹಾಗೂ ಕೊನೆಯವ. ಕೂಪನ್‍ಹೇಗನ್ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರ ಮತ್ತು ತತ್ತ್ವಶಾಸ್ತ್ರಗಳನ್ನು ಅಭ್ಯಾಸಮಾಡಿದ. ಅನಂತರ ರಾಜಕೀಯಕ್ಕೆ ಇಳಿಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದನಾದರೂ 1560ರಲ್ಲಿ ಘಟಿಸಿದ ಸೂರ್ಯ ಗ್ರಹಣವನ್ನು ವೀಕ್ಷಿಸಿದ ಬಳಿಕ ತನ್ನ ಗಮನವನ್ನು ಖಗೋಳವಿಜ್ಞಾನ ಮತ್ತು ಗಣಿತವಿಜ್ಞಾನದೆಡೆಗೆ ಹರಿಸಿದ. ಈ ಕ್ಷೇತ್ರಗಳಲ್ಲಿ ಅಧಿಕ ಪರಿಶ್ರಮ ಪಡೆಯಲು ಜರ್ಮನಿಗೆ ತೆರಳಿದ. 

	ಈತ ಬಲು ಜಗಳಗಂಟಿಯೂ ದುರಹಂಕಾರಿಯೂ ಆಗಿದ್ದ. ಒಮ್ಮೆ ಗಣಿತದ ಒಂದು ವಿಷಯವನ್ನು ಕುರಿತು ಚರ್ಚೆಮಾಡುವಾಗ (1565) ನಡೆದ ದ್ವಂದ್ವಯುದ್ಧದಲ್ಲಿ ತನ್ನ ಮೂಗನ್ನು ಕಳೆದುಕೊಂಡ. ಆಮೇಲೆ ಇಡೀ ಜೀವಮಾನ ಪರ್ಯಂತ ಲೋಹದ ಮೂಗನ್ನು ಅಳವಡಿಸಿಕೊಂಡಿದ್ದ.

	ಇವನ ಸೋದರಮಾವ ಸ್ಟೆನೊ ಬೆಲ್ ಎಂಬಾತ ಕ್ನುಡ್‍ಸ್ಟ್ರುಪ್ ಎಂಬ ಸ್ಥಳದ ಹತ್ತಿರ ಒಂದು ಪ್ರಯೋಗ ಶಾಲೆ ಸ್ಥಾಪಿಸಲು ಬ್ರಾಹೀಗೆ ಅನುವುಮಾಡಿಕೊಟ್ಟ (1571). ಇಲ್ಲಿ ತನ್ನ ವೀಕ್ಷಣೆಯನ್ನು ಮುಂದುವರಿಸುತ್ತಿದ್ದಾಗ ಆಕಾಶದ ಕ್ಯಾಸಿಯೋಪಿಯ (ಕುಂತೀ) ನಕ್ಷತ್ರಪುಂಜದಲ್ಲಿಯ ಒಂದು ಹೊಸನಕ್ಷತ್ರವನ್ನು (ನೋವಾ) ಪತ್ತೆಮಾಡಿದ. ಈ ನಕ್ಷತ್ರಕ್ಕೆ ಟೈಕೊ ನಕ್ಷತ್ರ ಎಂದೇ ಹೆಸರಿದೆ. ದಿನೋವ ಸ್ಟೆಲ್ಲ ಎಂಬ ಹೆಸರಿನ ಪುಸ್ತಕದಲ್ಲಿ (1573) ಇದರ ಬಗ್ಗೆ ವಿವರಣೆ ನೀಡಿದ್ದಾನೆ. ಟೈಕೊ ನಕ್ಷತ್ರ ಶುಕ್ರ ಗ್ರಹಕ್ಕಿಂತಲೂ ಹೆಚ್ಚು ಪ್ರಕಾಶದಿಂದ ಕೂಡಿತ್ತು. ಒಂದೂವರೆ ವರ್ಷದ ತನಕವೂ ಕಾಣಿಸುತ್ತಿತ್ತು.

	ಟೈಕೊ ರಚಿಸಿದ ಪುಸ್ತಕ ಮೂರು ಬಗೆಯಲ್ಲಿ ಪ್ರಯೋಜನಕ್ಕೆ ಬಂತು. ಮೊದಲನೆಯದಾಗಿ ಸ್ಫೋಟಗೊಳ್ಳುವ ನಕ್ಷತ್ರಗಳಿಗೆಲ್ಲ ನೋವಾ ಎಂಬ ಹೆಸರನ್ನು ಸ್ಥಿರಪಡಿಸಿತು. ಎರಡನೆಯದಾಗಿ ಯುವಕ ಖಗೋಳವಿಜ್ಞಾನಿ ಬ್ರಾಹೀಯ ಖ್ಯಾತಿ ಹೆಚ್ಚಿಸಿತು. ಮೂರನೆಯದಾಗಿ ಹೊಸನಕ್ಷತ್ರದ ದೂರವನ್ನು ಅಳೆಯುವುದು ಸಾಧ್ಯವಿಲ್ಲವೆಂದೂ ಅದರ ದೂರ ಚಂದ್ರನದಕ್ಕಿಂತಲೂ ಹೆಚ್ಚಿದೆಯೆಂಬುದನ್ನೂ ಪುಸ್ತಕ ತೋರಿಸಿಕೊಟ್ಟಿತು. ಖಗೋಳಮಂಡಲ ಪ್ರದೇಶ ಅನ್ಯೂನವಾದುದು ಮತ್ತು ಮಾರ್ಪಾಟು ಮಾಡಲಾಗದಂಥದು ಎಂದು ಅರಿಸ್ಟಾಟಲ್ ನಂಬಿದ್ದ. ಆ ಅಭಿಪ್ರಾಯವನ್ನು ಈ ಪುಸ್ತಕ ತಳ್ಳಿಹಾಕಿತು.

	ಡೆನ್ಮಾರ್ಕಿನ ದೊರೆ ಫ್ರೆಡರಿಕ್ II ಕೂಪನ್‍ಹೇಗನ್ನಿನ ಸಮೀಪದ ಹ್ವೆನ್ ಎಂಬ ದ್ವೀಪದಲ್ಲಿ ಒಂದು ಪ್ರಯೋಗಶಾಲೆ ನಿರ್ಮಿಸಲು ಅದಕ್ಕೆ ತಗಲುವ ವೆಚ್ಚವನ್ನು ಬ್ರಾಹೀಗೆ ನೀಡಿದ (1576). ಅಲ್ಲಿ ಬ್ರಾಹೀ ಸುಂದರ ಕಟ್ಟಡಗಳನ್ನು ನಿರ್ಮಿಸಿ ತಾನೇ ರೂಪಿಸಿದ ಉತ್ತಮತೆರನ ಉಪಕರಣಗಳನ್ನು ಅಳವಡಿಸಿದ. ಚರಿತ್ರಾರ್ಹವೂ ಮೊತ್ತಮೊದಲನೆಯದೂ ಆದ ವೇಧಶಾಲೆಯನ್ನು ಅಲ್ಲಿ ಸ್ಥಾಪಿಸಿದ. ಇದಲ್ಲದೆ ರಾಜಮನೆತನಕ್ಕೆ ಜ್ಯೋತಿಷ್ಕನಾಗಿಯೂ ಪಂಚಾಂಗಕರ್ತೃವಾಗಿಯೂ ಸೇವೆಸಲ್ಲಿಸಿದ.

	ಹೊಸ ನಕ್ಷತ್ರವನ್ನು ಕಂಡಮೇಲೆ (1572) ನಕ್ಷತ್ರಗಳ ಒಂದು ಕರಾರುವಾಕ್ಕಾದ ಕೋಷ್ಟಕ ಸಿದ್ಧಗೊಳಿಸಬೇಕೆಂದು ನಿರ್ಧರಿಸಿ 1576ರಿಂದ 1596ರ ತನಕ ಹ್ವೆನ್ ದ್ವೀಪದಲ್ಲೇ ಕಾರ್ಯಪ್ರವೃತ್ತನಾದ. ಅದ್ಭುತ ಧೂಮಕೇತುವೊಂದು ಆಕಾಶದಲ್ಲಿ ಕಾಣಿಸಿಕೊಂಡಿತು (1577). ಬಲು ಆಸಕ್ತಿವಹಿಸಿ ಅದನ್ನು ವೀಕ್ಷಿಸಿದ. ಅದರ ದೂರ ಚಂದ್ರನ ದೂರಕ್ಕಿಂತಲೂ ಹೆಚ್ಚಾಗಿತ್ತು. ಖಗೋಳಮಂಡಲ ಪ್ರದೇಶದ ಅನ್ಯೂನತೆಗೆ ಮತ್ತೊಂದು ಪೆಟ್ಟು ಆಯಿತು. ಧೂಮಕೇತುಗಳು ಅನಿರ್ದಿಷ್ಟವಾಗಿ ಗೋಚರಿಸುವುದಕ್ಕೂ ಅದೃಶ್ಯವಾಗುವುದಕ್ಕೂ ಇತರ ಗ್ರಹಗಳ ಸ್ಥಿರ ಹಾಗೂ ವಿಧಿಬದ್ಧ ಚಲನೆಗಳಿಗೂ ಸಾಮರಸ್ಯ ಇಲ್ಲವೆಂದು ಅಂಗೀಕರಿಸಿದ್ದ ಅರಿಸ್ಟಾಟಲ್, ಧೂಮಕೇತುಗಳು ವಾಯುಮಂಡಲದಲ್ಲಿ ಫಟಿಸುವ ನೈಸರ್ಗಿಕ ವಿದ್ಯಮಾನ ಎಂದೇ ನಂಬಿದ್ದ. ಈ ನಂಬಿಕೆ ಸರಿಯಲ್ಲ ಎಂಬುದನ್ನು ಬ್ರಾಹೀ ತೋರಿಸಿಕೊಟ್ಟ.

	ಧೂಮಕೇತುವಿನ ತೋರ್ಕೆ ಚಲನೆಯನ್ನು ಪರಿಶೀಲಿಸಿದ ಬ್ರಾಹೀ ಸೂರ್ಯನ ಸುತ್ತ ಅದರ ಕಕ್ಷೆ ವೃತ್ತಾಕಾರವಾಗಿರದೆ ಕಕ್ಷೆಯ ತುದಿ ಮೊನಚಾಗಿರುವುದೆಂಬ ಸ್ಥೂಲ ತೀರ್ಮಾನಕ್ಕೆ ಬಂದ. ಈ ತೀರ್ಮಾನ ನಿಜವೇ ಆಗಿದ್ದ ಪಕ್ಷಕ್ಕೆ ಧೂಮಕೇತುವೂ ಅನೇಕ ಗ್ರಹಗಳ ಮೂಲಕ ಹಾದು ಹೋಗಬೇಕಾಗಿತ್ತು. ಇಂಥ ತೀರ್ಮಾನ ಬ್ರಾಹೀಯ ಸ್ವಯಂ ಪ್ರವೃತ್ತಿಗೆ ವಿರುದ್ಧವಾಗಿತ್ತು ಕೂಡ. ವಿಶ್ವದ ಕೇಂದ್ರ ಭೂಮಿ ಎಂದು ಭಾವಿಸಿದ, ಗ್ರೀಕ್ ತತ್ತ್ವಶಾಸ್ತ್ರಜ್ಞ ಟೌಲೆಮಿ ಮತ್ತು ಅವನ ಅನುಯಾಯಿಗಳ ನಂಬಿಕೆಯ ವಿರುದ್ಧ ನಡೆದುಕೊಳ್ಳಲು ಬ್ರಾಹೀ ಧೈರ್ಯ ಮಾಡದಿದ್ದುದೂ ಇದಕ್ಕೆ ಕಾರಣ.

	ಧೂಮಕೇತುವಿನ ಬಗ್ಗೆ ಬರೆದ ಪುಸ್ತಕದಲ್ಲಿ ಮಧ್ಯವರ್ತಿ ಮಾರ್ಗವನ್ನು ಬಳಸಿದ. ಭೂಮಿಯನ್ನು ಉಳಿದು ಇತರ ಎಲ್ಲ ಗ್ರಹಗಳೂ ಸೂರ್ಯನ ಸುತ್ತ ತಿರುಗುತ್ತವೆಂಬುದನ್ನು ಮಾತ್ರ ಸೂಚಿಸಿದ. ಸೂರ್ಯ ತನ್ನ ಸಹಚರ ಗ್ರಹಗಳೊಂದಿಗೆ ಭೂಮಿಯ ಸುತ್ತ ತಿರುಗುತ್ತದೆ ಎಂಬ ಅಭಿಪ್ರಾಯವನ್ನು ಮಾತ್ರ ಬಿಡಲಿಲ್ಲ. ಈ ಅಭಿಪ್ರಾಯಕ್ಕೆ ತೀವ್ರ ವಿರೋಧವಿದ್ದುದರಿಂದ ಬ್ರಾಹೀಯ ವಾದಕ್ಕೆ ಯಾವ ಬೆಲೆಯೂ ಸಿಗಲಿಲ್ಲ.

	ಕಾಲ ಸಂದಂತೆ ಬ್ರಾಹೀ ಆಕಾಶಕಾಯಗಳನ್ನು ಕುರಿತು ನಿಖರ ಪರಿಶೀಲನೆಗಳನ್ನು ಮಾಡತೊಡಗಿದ. ದೂರದರ್ಶಕದ ಸಹಾಯವಿಲ್ಲದೆ ಇಂಥ ಪರಿಶೀಲನೆಗಳನ್ನು ನಡೆಸಿದವರ ಪೈಕಿ ಮೊದಲಿಗನಾದ. ಖಗೋಳೀಯ ಮಾಪನೆಗಳ ಪೈಕಿ ಬಹುತೇಕವನ್ನು ಬ್ರಾಹೀ ಪರಿಷ್ಕರಿಸಿದ. ಇವಲ್ಲದೆ ಖಗೋಳವಿಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳನ್ನೂ ಉತ್ತಮಪಡಿಸಿದ; ಗ್ರಹಗಳ, ಅದರಲ್ಲೂ ಮುಖ್ಯವಾಗಿ ಮಂಗಳ ಗ್ರಹದ ಚಲನೆಯನ್ನು ಹಿಂದೆಂದೂ ಇರದಿದ್ದ ನಿಖರತೆಯಿಂದ ಪರಿಶೀಲಿಸಿದ. ಸೂರ್ಯನ ಚಲನೆಗೆ ಸಂಬಂಧಿಸಿದ ಕೋಷ್ಟಕವನ್ನು ತಯಾರಿಸಿದ. ಈ ಕೋಷ್ಟಕ ಹಿಂದೆ ಇದ್ದ ಕೋಷ್ಟಕಕ್ಕಿಂತಲೂ ಬಲು ಉತ್ತಮವಾಗಿತ್ತು. ವರ್ಷದ ಅವಧಿಯನ್ನು ಒಂದು ಸೆಕೆಂಡಿಗೂ ಕಡಿಮೆ ಇರುವಷ್ಟು ನಿಖರತೆಯಿಂದ ನಿರ್ಧರಿಸಿದ.

	ಬ್ರಾಹೀಗೆ ಪೋಷಕನಾಗಿದ್ದ ಫ್ರೆಡರಿಕ್ ದೊರೆ 1588ರಲ್ಲಿ ಮೃತಪಟ್ಟ. ಅನಂತರ ಕ್ರಿಶ್ಚಿಯನ್ Iಗಿ ಎಂಬಾತ ಅಧಿಕಾರಕ್ಕೆ ಬಂದ. ಈ ದೊರೆ ಬ್ರಾಹೀಯ ದುರಹಂಕಾರವನ್ನೂ ಬೊಕ್ಕಸಕ್ಕೆ ಆಗುತ್ತಿದ್ದ ವೆಚ್ಚವನ್ನೂ ಸಹಿಸಲಾರದೆ ಈತನಿಗೆ ಸಲ್ಲುತ್ತಿದ್ದ ಗೌರವಧನವನ್ನು ನಿಲ್ಲಿಸಿಬಿಟ್ಟ (1596). ಬ್ರಾಹೀ ಡೆನ್ಮಾರ್ಕ್ ತೊರೆಯಬೇಕಾಯಿತು (1597). ಪ್ರೇಗ್ ನಗರವನ್ನು ತಲಪಿ (1599) ಅಲ್ಲಿ ರೂಡಾಲ್ಫ್ ಚಕ್ರವರ್ತಿಯ ಆಶ್ರಯ ಪಡೆದ. ಆತ ಇವನಿಗೆ ತಕ್ಕ ಸಂಭಾವನೆ ನೀಡಿ, ವೀಕ್ಷಣೆಗಳಿಗೆಂದು ಪ್ರೇಗ್ ಹತ್ತಿರದಲ್ಲಿಯ ಬೆನಾಟ್ಕಿ ಎಂಬ ಅರಮನೆಯನ್ನು ಬಿಟ್ಟುಕೊಟ್ಟ. ಹ್ವೆನ್ ದ್ವೀಪದಿಂದ ಪ್ರೇಗಿಗೆ ಬ್ರಾಹೀಯ ಎಲ್ಲ ಉಪಕರಣಗಳೂ ವರ್ಗಾವಣೆಯಾದುವು. ಯುವಕ ಖಗೋಳ ವಿಜ್ಞಾನಿ ಮತ್ತು ಗಣಿತದ ಯೋಹನ್ ಕೆಪ್ಲರ್ (1571-1630) ಎಂಬವನ ಸಹಕಾರ ಬ್ರಾಹೀಗೆ ಒದಗಿತು (1600). ಕೆಪ್ಲರನ ಸಹಾಯದಿಂದ ಕೆಲವೊಂದು ವೀಕ್ಷಣೆಗಳನ್ನು ನಡೆಸಲಾಯಿತು.

	ಬ್ರಾಹೀ ಪ್ರೇಗ್ ನಗರದಲ್ಲಿ ಮೃತನಾದ (24 ಅಕ್ಟೋಬರ್ 1601). ಡೆನ್ಮಾರ್ಕಿನ ಪ್ರಯೋಗಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಬ್ರಾಹೀಯ ಉಪಕರಣಗಳನ್ನು ಮುಂದೆಂದೂ ಯಾರೂ ಉಪಯೋಗಿಸಲಿಲ್ಲ. ಇವನ ಮರಣಾನಂತರ ಒಂದು ದಶಕದೊಳಗೇ ಗೆಲಿಲಿಯೋನ ದೂರದರ್ಶಕಗಳು ಬಳಕೆಗೆ ಬಂದು ಬ್ರಾಹೀಯದೆಲ್ಲವೂ ಮೂಲೆಪಾಲಾದುವು. ಮುಂದೆ ನಡೆದ ಯುದ್ಧದಲ್ಲಿ ಅವೆಲ್ಲ ನಾಶವಾದವು.

	ಬ್ರಾಹೀ ನಡೆಸಿದ ವೀಕ್ಷಣೆಗಳನ್ನು ಕೆಪ್ಲರ್ ಕ್ರೋಡೀಕರಿಸಿ ಅವನ್ನು ಎರಡು ಸಂಪುಟಗಳಲ್ಲಿ ಸಂಗ್ರಹಿಸಿದ (1602-03). ಮೊದಲನೆಯ ಸಂಪುಟ ಸೂರ್ಯ ಚಂದ್ರರ ಚಲನೆಗೆ ಸಂಬಂಧಪಟ್ಟದ್ದು. 777 ಸ್ಥಿರ ನಕ್ಷತ್ರಗಳ ಸ್ಥಾನಗಳ ಬಗ್ಗೆ ವಿವರಗಳನ್ನು ಒಳಗೊಂಡಿತ್ತು. ರೂಡಾಲ್ಫಿನ್ಸ್ ಟೇಬಲ್ಸ್ ಎಂಬ ಕೋಷ್ಟಕವನ್ನು ಕೆಪ್ಲರ್ ಪ್ರಕಟಿಸಿದಾಗ (1627) ಅದರಲ್ಲಿಯ ಯುರೇನಿಯನ್‍ಬರ್ಗ್ ಎಂಬಲ್ಲಿ ಮುದ್ರಣಗೊಂಡಿತು. ಈ ಸಂಪುಟದಲ್ಲಿ ಹಿಂದೆ ಕಾಣಿಸಿಕೊಂಡ (1577) ಧೂಮಕೇತುವಿನ ಬಗ್ಗೆ ವಿವರಗಳೂ ಬ್ರಾಹೀಯ ಸಿದ್ಧಾಂತದ ಬಗ್ಗೆ ಮಾಹಿತಿಗಳೂ ಇದ್ದವು.

	ತಾನು ನಡೆಸಿದ ನಿಖರ ವೀಕ್ಷಣೆಗಳು ಸ್ಥಿರ ನಕ್ಷತ್ರಗಳಿಗೆ ಸಾಪೇಕ್ಷಚಲನೆ ಇರುವುದಿಲ್ಲವೆಂಬುದನ್ನು ತೋರಿಸಿಕೊಟ್ಟಿವೆ ಎಂದು ಬ್ರಾಹೀ ಗೆಲಿಲಿಯೋಗೆ ಪತ್ರ ಬರೆದು ತಿಳಿಸಿದ್ದ. ಗೆಲಿಲಿಯೋ ಸಿದ್ಧಾಂತ ಮತ್ತು ಕೊಪರ್ನಿಕಸನ ಸಿದ್ಧಾಂತಗಳ ನಡುವಿನ ವ್ಯತ್ಯಾಸವನ್ನು ಗೆಲಿಲಿಯೋಗೆ ತಿಳಿಸಲು ಪ್ರಯತ್ನಿಸಿದನಾದರೂ ಗೆಲಿಲಿಯೋಗೆ ಅದು ಮನದಟ್ಟಾಗಲೇ ಇಲ್ಲ. ಡಯಲಾಗ್ ಆನ್ ದಿ ಟೂ ಸಿಸ್ಟಮ್ಸ್ ಆಫ್ ದಿ ವಲ್ರ್ಡ್ ಎಂಬ ಪುಸ್ತಕದಲ್ಲಿ ಗೆಲಿಲಿಯೋ ಬ್ರಾಹೀಯನ್ನು ಆರಿಸ್ಟಾಟಲ್ ಮತ್ತು ಟಾಲೆಮಿಯ ಗುಂಪಿಗೆ ಸೇರಿಸಿದ್ದನಾದರೂ ಬ್ರಾಹೀಯ ವೀಕ್ಷಣೆಗಳ ಫಲಿತಾಂಶಗಳ ಬಗ್ಗೆ ಮಾತ್ರ ಶ್ಲಾಘಿಸಿದ್ದ.    				(ಎಸ್.ಎನ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ